ಮೆಜೆಲಾನ್, ಫರ್ಡಿನೆಂಡ್   
 	1480-1521. ಪೋರ್ಚುಗೀಸ್ ಅನ್ವೇಷಕ. ಖಚಿತ ಜನನ ದಿನಾಂಕ ತಿಳಿದಿಲ್ಲ. ಮರಣ ದಿನಾಂಕ 27 ಏಪ್ರಿಲ್ 1521. ಪೋರ್ಚುಗಲ್ಲಿನ ವಿಧೇಯ ಪ್ರಜೆ ಮತ್ತು ಶಿಸ್ತಿನ ಸೈನಿಕನಾಗಿದ್ದರೂ ಸೇನಾಚರಣೆಗಾಗಿ ಮೊರಾಕ್ಕೋಗೆ ಹೋಗಿದ್ದಾಗ ಈತ ಸ್ಥಳೀಯರ ಜೊತೆ ವ್ಯಾಪಾರ ಮಾಡಿದ ಎಂಬ ಕಾರಣಕ್ಕಾಗಿ ರಾಜದ್ರೋಹಾರೋಪಣೆಯನ್ನು ಎದುರಿಸಬೇಕಾಯಿತು. ಈತನನ್ನು ಸೇವೆಯಿಂದ ವಜಾಮಾಡಿದರು (1517). ಅಲ್ಲಿಯ ಯುದ್ಧದಲ್ಲಿ ಗಾಯಗೊಂಡು ಶಾಶ್ವತವಾಗಿ ಅಂಗವಿಕಲನೂ ಆಗಿದ್ದು ವಿಧಿ ಇಲ್ಲದೆ ಮೆಜೆಲಾನ್ ಪೋರ್ಚುಗಲ್ ದೇಶತೊರೆದು ಸ್ಪೇನ್ ಸೇರಿದ.

	ಬದುಕಿನಲ್ಲಿ ಹೀಗೆ ಕಹಿ ಉಂಡ ಈತ ಸ್ಪೇನ್ ರಾಷ್ಟ್ರದಲ್ಲಿ ಸೈನಿಕಾನ್ವೇಷಕನಾಗಿ ದಾಖಲಾದ. ಕೊಲಂಬಸ್ (1451-1506) ಮಾಡಿದ ಯುಗಪ್ರವರ್ತಕ ಆವಿಷ್ಕಾರ (1492) ಆಗ ಅನ್ವೇಷಕರ ಎದುರು ನವದಿಗಂತಗಳನ್ನು ಅನಾವರಣಗೊಳಿಸಿದ್ದುವು. ಭೂಮಿ ದುಂಡಗಿದೆಯೆಂದು ನಂಬಿದ್ದ ಕೊಲಂಬಸ್ ಯುರೋಪಿನಿಂದ ಪಶ್ಚಿಮಾಭಿಮುಖವಾಗಿ ಯಾನಗೈದು ಪೂರ್ವ ದಿಶೆಯಿಂದ ಯುರೋಪಿಗೆ ಮರಳಲು ಯೋಜಿಸಿದ್ದ. ಆದರೆ ಈತನ ಯಾತ್ರೆ ಅಮೆರಿಕಖಂಡದ ಆವಿಷ್ಕಾರದಲ್ಲಿ ಪರ್ಯವಸಾನಗೊಂಡಿತು. ಅಲ್ಲಿಂದಲೂ ಮುಂದಕ್ಕೆ (ಪಶ್ಚಿಮಾಭಿಮುಖವಾಗಿ) ಯಾನಮಾಡಿ ಕೊಲಂಬಸನ ವಿಫಲಸಾಹಸವನ್ನು ಸಫಲವಾಗಿಸುವುದು ಮೆಜೆಲಾನ್ ಆಯ್ದುಕೊಂಡ ಸವಾಲಾಗಿತ್ತು.

	ಸ್ಪೇನಿನ ರಾಜ ಐದನೆಯ ಚಾಲ್ರ್ಸ್‍ನಿಂದ ಪುರಸ್ಕøತನಾದ ಈತ ನೂತನ ಖಂಡಾನ್ವೇಷಕ ನೌಕಾಬಲದ ನಾಯಕನಾಗಿ ನೇಮಕಗೊಂಡು 1519 ಆಗಸ್ಟ್ 10 ರಂದು ಪಶ್ಚಿಮಾಭಿಮುಖ ಯಾತ್ರೆ ಪ್ರಾರಂಭಿಸಿದ.  ಆಗ ಹೊರಟ ಐದು ನೌಕೆಗಳೂ ಅಟ್ಲಾಂಟಿಕ್ ಸಾಗರ ದಾಟಿ ದಕ್ಷಿಣ ಅಮೆರಿಕದ ಪೂರ್ವಕರಾವಳಿಗುಂಟ ದಕ್ಷಿಣಕ್ಕೆ ಸಾಗಿದುವು-ಎಲ್ಲಿ ನೆಲದಲ್ಲಿ ತುಸು ಎಡೆ ದೊರಕುವುದೊ ಅಲ್ಲಿ ಅದನ್ನು ದಾಟಿ ಮತ್ತೆ ಮುಂದಿನ ಸಾಗರಗಾಮಿ ಆಗುವ ಉದ್ದೇಶದಿಂದ ಸಾಕಷ್ಟು ದಕ್ಷಿಣಕ್ಕೆ ಸಾಗಿದಾಗ (ಖಂಡದ ಹೆಚ್ಚು ಕಡಿಮೆ ತುದಿಯಲ್ಲಿ) ತೆರೆಬಾಗಿಲು ಎದುರಾಯಿತು.  ಇದೊಂದು ವಿಶಾಲಸಾಗರ ಸೇರಿದ.  ಈ ಪ್ರವೇಶ-ನಿರ್ಗಮದ್ವಾರಕ್ಕೆ ಆತ ಆಲ್ ಸೇಂಟ್ಸ್ ಜಲಸಂಧಿ ಎಂಬ ಹೆಸರು ನೀಡಿದ.  ಆದರೆ ತರುವಾಯ ದಿವಸಗಳಲ್ಲಿ ಇದು ಮೆಜೆಲಾನನ ಜಲಸಂಧಿ ಎಂದೇ ಪ್ರಸಿದ್ಧವಾಗಿದೆ.
ಜಲಸಂಧಿಯನ್ನು ದಾಟುವ ವೇಳೆ ಅವರು ಗಗನದಲ್ಲಿ, ಆ ತನಕ ಗಮನಿಸಿರದಿದ್ದ ತೇಜೋಮೇಘಗಳ ಖಂಡಗಳನ್ನು ಗುರುತಿಸಿದರು-ಅಖಂಡ ಆಕಾಶಗಂಗೆಯ ವಿವಿಕ್ತ ಖಂಡಗಳೋ ಇವು ಎಂಬಂತಿದ್ದವು.  ದಕ್ಷಿಣ ಗೋಳಾರ್ಧದಲ್ಲಿ ಮಾತ್ರ ಕಾಣುವ ಈ ತೇಜೋಮೇಘಗಳು ಆಕಾಶಗಂಗೆಯಂತೆ ಅತಿ ದೂರದಲ್ಲಿರುವ ಅಸಂಖ್ಯ ನಕ್ಷತ್ರಗಳ ಬೃಹತ್ಸಮುದಾಯಗಳು.  ಇವುಗಳಿಗೆ ಮೆಜೆಲಾನಿಕ್ ಮೇಘಗಳು (ನೋಡಿ- ಮೆಜೆಲಾನಿಕ್-ಮೇಘಗಳು) ಎಂಬ ಹೆಸರು ರೂಢವಾಗಿದೆ.
ನಮ್ಮ ಸೂರ್ಯ ಸದಸ್ಯ ನಕ್ಷತ್ರವಾಗಿರುವ ಆಕಾಶಗಂಗೆ ಎಂಬ ಬ್ರಹ್ಮಾಂಡಕ್ಕೆ (ಗ್ಯಾಲಾಕ್ಸಿ) ಅತಿ ಸಮೀಪದ ಬ್ರಹ್ಮಾಂಡವೇ ಮೆಜೆಲಾನಿಕ್ ಮೇಘಗಳು-ದೊಡ್ಡ ಮೆಜೆಲಾನಿಕ್ ಮೇಘ (ಲಾರ್ಜರ್ ಮೆಜೆಲಾನಿಕ್ ಕ್ಲೌಡ್) :  ಚಿಕ್ಕ ಮೆಜೆಲಾನಿಕ್ ಮೇಘ (ಸ್ಮಾಲರ್ ಮೆಜೆಲಾನಿಕ್ ಕ್ಲೌಡ್).  ಇವನ್ನು ಕ್ರಮರಹಿತ ಬ್ರಹ್ಮಾಂಡಗಳೆಂದು (ಇರ್ರೆಗ್ಯುಲರ್ ಗ್ಯಾಲಕ್ಸೀಸ್) ಹೇಳುವುದುಂಟು.  ಮೆಜೆಲಾನ್ ಈ ಬ್ರಹ್ಮಾಂಡಗಳನ್ನು ಗುರುತಿಸಿದ ಮೊದಲಿಗ ಎಂಬುದು ಮಾತ್ರ ಇಲ್ಲಿ ಪ್ರಸ್ತುತ.

    ಜಲಸಂಧಿಯ ನೇರ ಮಾಡಿದ ಯಾನ ಅತ್ಯಂತ ಅಪಾಯಕಾರಿ ಆಗಿತ್ತು.  ಆದರೆ ಒಮ್ಮೆ ಇದು ಮುಗಿಯಿತೋ ಮುಂದೆ ಗಂಭೀರ ಸಲಿಲದ ಪ್ರಶಾಂತ ಸಾಗರ ಎದುರಾಯಿತು ಎಂದೇ ಮೆಜೆಲಾನ್ ಇದನ್ನು ಪೆಸಿಫಿಕ್ (ಶಾಂತ) ಸಾಗರ ಎಂದು ಹೆಸರಿಸಿದ.  ವಾಸ್ತವವಾಗಿ ಯಾವ ಸಾಗರವೂ-ಅಟ್ಲಾಂಟಿಕ್ ಆಗಲಿ ಪೆಸಿಫಿಕ್ ಆಗಲಿ ಇನ್ನೊಂದುಕ್ಕಿಂತ ಅಧಿಕ ಶಾಂತವಾಗಿರುವುದು ಅಸಾಧ್ಯ.  ಮುಂದಿನ ತೊಂಬತ್ತೆಂಟು ದಿವಸಗಳ ಪರ್ಯಂತ ಮೆಜೆಲಾನ್ನ ನೌಕಾಪಡೆ ಪೆಸಿಫಿಕ್ ಸಾರಗದ ಅಖಂಡ ಜಲರಾಶಿಯಲ್ಲಿ ನೆಲ ಕಾಣದೇ ಮುಂದೆ ಮುಂದೆ ತೆರಳಿತು.  ಸಾಗರದ ಆಳ ಅಲೆಯಲು ಇವನಾಗ ಪ್ರಯತ್ನಿಸಿದ.  ಲಿಖಿತ ದಾಖಲೆ ಪ್ರಕಾರ ಇದೇ ಈ ನಿಟ್ಟಿನಲ್ಲಿ ನಡೆದ ಮೊದಲ ಪ್ರಯೋಗ.  ನಡು ಪೆಸಿಫಿಕ್ಕಿನಲ್ಲಿ ಸುಮಾರು 800 ಮೀ ಉದ್ದದ ಭಾರಸಹಿತ ದಾರವನ್ನು ಸಾಗರದೊಳಗೆ ಕಂತಲು ಬಿಟ್ಟ.  ಆದರೆ ತಳ ಸಿಕ್ಕಲಿಲ್ಲ.  ತಳ ಸಿಕ್ಕದಿದ್ದರೂ ನೆಲ ದಕ್ಕಿತು ಕೊನೆಗೆ 1521 ಮಾರ್ಚ್ 6 ರಂದು.  ಉಪವಾಸ, ಜಲವಾಸ, ಏಕಾಂತವಾಸ ಇವುಗಳಿಂದ ಜಜ್ಜರಿತರಾಗಿದ್ದ ನಾವಿಕರು ಆ ವೇಳೆಗೆ ಸರ್ವನಾಶದ ಅಂಚಿನಲ್ಲಿದ್ದರು.  ಅವರು ಏರಿದ ದಂಡೆಯ ಹೆಸರು ಗ್ವಾಮ್ (ಉತ್ತರ ಪೆಸಿಫಿಕ್ಕಿನಲ್ಲಿ ಫಿಲಿಪೀನ್ಸ್‍ನ ಪೂರ್ವಕ್ಕೆ ಇರುವ ದ್ವೀಪ ಸಮುದಾಯದಲ್ಲಿರುವ ಅತಿ ದೊಡ್ಡ ದ್ವೀಪ).  ಅಲ್ಲಿ ಆಹಾರ ನೀರು ಪಡೆದು ಶಕ್ತಿ ಪುನರ್ಭರಿಸಿಕೊಂಡು ಮುಂದೆ ಫಿಲಿಪೀನ್ಸ್‍ಗೆ ಯಾನಿಸಿದರು.  ಆದರೆ ಮೆಜೆಲಾನ್ ಅಲ್ಲಿಯ ನಿವಾಸಿಗಳ ಜೊತೆಗಿನ ಜಗಳದಲ್ಲಿ ಕೊಲ್ಲಲ್ಪಟ್ಟ.

    ಮೆಜೆಲಾನ್ ಕನಸು-ನೌಕೆಯಲ್ಲಿ ಭೂಪ್ರದಕ್ಷಿಣೆ-ಮುಂದೆ ಆತನ ಅನುಯಾಯಿ ಜುವಾನ್ ಸೆಬಾಸ್ಟಿಯನ್ ಡೆಲ್ ಖನೋ (1460-1526) ಎಂಬಾತನಿಂದ ಪೂರ್ತಿಗೊಂಡಿತು.  ಮೊದಲು ಹೊರಟ ಐದು ನಾವೆಗಳ ಪೈಕಿ ನಾಲ್ಕು ನಾವೆಗಳೂ ನಾಶವಾಗಿದ್ದುವು.  ಐದನೆಯದರ ನಾಯಕನೇ ಖನೋ ವಿಕ್ಟೊರಿಯಾ ಎಂಬ ಹೆಸರಿನ ಈ ನೌಕೆಯನ್ನು ಇವನು ಹಿಂದೂಸಾಗರದ ಮೂಲಕ ಯಾನಿಸಿ ಆಫ್ರಿಕದ ದಕ್ಷಿಣ ತುದಿಯನ್ನು ಬಳಸಿ ಸ್ಪೇನನ್ನು ತಲಪಿದಾಗ (8 ಸೆಪ್ಟೆಂಬರ್ 1522) ಭೂಮಿಯ ಪ್ರಥಮ ಜಲಪರ್ಯಟನೆ ಮುಗಿದಂತಾಯಿತು.  ಈ ಕೀರ್ತಿಗೆ ಭಾಜನಾದವನು ಖನೋ.  ಭೂಮಂಡಲವನ್ನು ನೀರಿನ ಒಂದೇ ಹರವು ಸುತ್ತುವರಿಸಿದೆ.  ಸಪ್ತಸಮುದ್ರಗಳಲ್ಲ ಎಂಬುದನ್ನು ಈ ಪರ್ಯಟನೆ ಯಶಸ್ವಿಯಾಗಿ ಸಾಧಿಸಿ ತೋರಿಸಿತು.

   ಆ ದಿವಸಗಳ ತಂತ್ರವಿದ್ಯೆಯ ಮಟ್ಟ ಗಮನಿಸುವಾಗ ಮೆಜೆಲಾನನ ಸಹಸ, ಸಾಧನೆ ಮತ್ತು ಸಿದ್ಧಿ ಇಂದಿನ ದಿವಸಗಳಲ್ಲಿ ಗಗಾರಿನ್ನನ ಪ್ರಥಮ ಅಂತರಿಕ್ಷ ಭೂಕಕ್ಷಾಯಾನದ ಸಾಹಸ, ಸಾಧನೆ, ಸಿದ್ಧಿಗಳಿಗೆ ಸಮಾನವಾಗಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ